ದೊಡ್ಡಯ್ಯ  
ಸು. ಕ್ರಿ.ಶ 1550  ಪಿರಿಯಾಪಟ್ಟಣವನ್ನು ಆಳುತ್ತಿದ್ದ ವಿರುಪರಾಜೇಂದ್ರನೆಂಬ ಪಾಳೇಗಾರನಲ್ಲಿ ಕರಣಿಕವೃತ್ತಿಯಲ್ಲಿದ್ದ ದೇವಪ್ಪನ ಮಗ. ಅತ್ರೇಯ ಗೋತ್ರದ ಜೈನ. ಗುರು ಪಂಡಿತಮುನಿ, ಈತನ ಗ್ರ್ರಂಥ ಚಂದ್ರಪ್ರಭ ಚರಿತೆ-ಹಿಂದೆ ಗುಣಭದ್ರ ಹೇಳಿದ್ದ ಕಥೆಯನ್ನು ಆಧರಿಸಿ ರಚಿಸಿದ ಸಾಂಗತ್ಯ ಕಾವ್ಯ. ಎಂಟನೆಯ ತೀರ್ಥಂಕರನಾದ ಚಂದ್ರಪ್ರಭನ ಕಥೆಯೇ ಇದರ ವಸ್ತು. ಇಪ್ಪತ್ತೆಂಟು ಸಂಧಿಗಳ 4,475 ಪದ್ಯಗಳ ಕಾವ್ಯವಿದು.

  
ವರ್ಣನಾದೃಷ್ಟಿಯಿಂದಾಗಲಿ ಕಥಾನಿರೂಪಣೆಯ ದೃಷ್ಟಿಯಿಂದಾಗಲಿ, ಇದರ ಮಹತ್ತ್ವ ಹಿರಿದಲ್ಲ; ರತ್ನಾಕರನ ಭರತೇಶ ವೈಭವದೊಂದಿಗಾಗಲಿ ಪಂಪನ ಜೈನ ಪುರಾಣದ ಜೊತೆಯಾಗಲಿ ಹೋಲಿಸುವಂಥ ಕೃತಿಯಲ್ಲ. ಆದರೆ ಈತ ತನ್ನ ಹಿಂದಿನವರಲ್ಲಿ ಅನೇಕರ ಹೆಸರನ್ನೂ ಅವರ ಕೃತಿಗಳನ್ನೂ ಸ್ಮರಿಸಿಕೊಂಡಿರುವುದರಿಂದ ಅವರ ಕಾಲ ಹಾಗೂ ಕೃತಿ ನಿರ್ಣಯಕ್ಕೆ ಇದು ಸಹಾಯಕವಾಗಿದೆ. ಕೆಲವು ಉತ್ತಮವಾದ ವರ್ಣನೆಗಳಿಂದಲೂ ಹಿಂದಿನ ಕವಿಗಳ ಸ್ಮರಣೆಯಿಂದಲೂ ಕೂಡಿದ ಈತನ ಕಾವ್ಯ ಸಾಂಗತ್ಯದಲ್ಲಿರುವ ಒಂದು ಸತ್ಕಾವ್ಯ ಎಂದು ಹೇಳಬಹುದು.
(ಡಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ